ಡೆಂಗೆ: ಪರಂಗಿ ಎಲೆಗಳಿಗೆ ಡಿಮಾ೦ಡೋ ಡಿಮ್ಯಾಂಡ್

Date:27-Sep-2016

ಪಪ್ಪಾಯ ಎಲೆಗಳಿಗೆ ಈಗ ಭಾರಿ ಡಿಮ್ಯಾಂಡ್.!! ಡೆಂಗೆ ರೋಗಿಗಳಿಗೆ ಪಪ್ಪಾಯ ಎಲೆಯ ರಸ ನೀಡಿದರೆ ರಕ್ತದಲ್ಲಿರುವ platlets ಸಂಖ್ಯೆ ವೇಗವಾಗಿ ಹೆಚ್ಚುತ್ತದೆ ಎಂಬ ಭಾವನೆ ಇದಕ್ಕೆ ಕಾರಣ. ರಾಜ್ಯದಲ್ಲಿ ಈಗ ತೀವ್ರವಾಗಿರುವ ಡೆಂಗೆ ಜ್ವರಕ್ಕೆ ಪರಂಗಿ ಎಲೆಗಳ ರಸ ಅತ್ಯುತ್ತಮ ಔಷಧ ಎಂದು ಹಲವು ವೈದ್ಯರು ಸಲಹೆ ನೀಡುತ್ತಿದ್ದಾರೆ . ಹಾಗಾಗಿ ರೋಗಿಗಳ ಕುಟುಂಬದವರು ಪಪ್ಪಾಯ ಗಿಡಗಳ ಮೊರೆ ಹೊಗಿದ್ದಾರೆ .ಗ್ರಾಮಾಂತರ ಭಾಗಗಳಲ್ಲಿ ಪಪ್ಪಾಯ ಗಿಡಗಳು ಸುಲಭವಾಗಿ ಸಿಗುತ್ತವೆ. ಆದರೆ ಬೆಂಗಳೂರಿನಲ್ಲಿ ವಿರಳವಾಗಿರುವ ಈ ಮರಗಳಿಗೆ ಹುಡುಕಾಟ ತೀವ್ರವಾಗಿದೆ. ಎಲೆಗಳೆಲ್ಲ ಬೋಳಾಗಿ ಮರದ ತುಂಬ ಕಾಯಿಗಳು ಮಾತ್ರ ನೇತಾಡುತ್ತಿವೆ.! ಇದರ ವಿಶೇಷ ಏನು.? "ಪರಂಗಿ ಎಲೆಗಳಲ್ಲಿ ಕೈಮೋ ಪ್ಯಾಪಿನ್ (chymopapain ) ಮತ್ತು ಪ್ಯಾಪಿನ್ ಎಂಬ ಕಿಣ್ವ (ಎಂಜೈಮ್ ) ಇರುವುದನ್ನು ಸಂಶೋಧನೆ ಮೂಲಕ ಪತ್ತೆ ಮಾಡಲಾಗಿದೆ. ಅದರಲ್ಲೂ ಎಳೆ ಪಪ್ಪಾಯ ಎಲೆಗಳಲ್ಲಿ ಇವುಗಳ ಪ್ರಮಾಣ ಹೆಚ್ಚಿರುತ್ತದೆ. ಈ ಕಿಣ್ವಗಳು ಮನುಷ್ಯನ ದೇಹದಲ್ಲಿ ಪ್ಲೇಟ್ಲೇಟ್ ಗಳನ್ನು ಹೆಚ್ಚಿಸುತ್ತದೆ. ಜತೆಗೆ ಪಪ್ಪಾಯ ಎಲೆಯ ರಸ ಲಿವರ್ (ಯಕೃತ್) ನ ಕಾರ್ಯ ಸುಗಮಗೊಳಿಸುತ್ತದೆ." ಎನ್ನುತ್ತಾರೆ ಆಹಾರ ತಜ್ಞೆ ಡಾ. ನಮ್ರತಾ ಪ್ರಮೋದ್. ಕಿವಿಯಿಂದ ಕಿವಿಗೆ ಸುದ್ದಿ ಡೆಂಗೆ ಜ್ವರದ 'ಕಿವಿ' ಹಿಂಡುತ್ತದೆ ಎಂಬ ಭಾವನೆ ಎಲ್ಲೆಡೆ ಹರಡಿ ನ್ಯೂಜಿಲ್ಯಾಂಡ್ ನ ಕಿವಿ ಹಣ್ಣಿಗೆ ಭಾರಿ ಬೇಡಿಕೆ ಬಂದಿದೆ. ಮೊಟ್ಟೆಯಾಕಾರದಲ್ಲಿರುವ ಖಾಕಿ ಬಣ್ಣದ ಈ ಹಣ್ಣು ಪೌಷ್ಟಿಕಾಂಶಗಳ ಗಣಿ. ಈ ಹಣ್ಣಿನ ಸುತ್ತಲೂ ಉರುಟಾದ ಕಂಬಳಿಯಲ್ಲಿರುವ ಎಳೆಗಳಿರುತ್ತವೆ. ಈ ಕಾರಣಕ್ಕೆ ಯಾರ ಗಮನಕ್ಕೂ ಬೀಳದ ಹಣ್ಣು ಈಗ ಕೈಗೆ ಸಿಕ್ಕರೆ ದೊಡ್ಡ ಪುಣ್ಯ ಎನ್ನುವಂತಾಗಿದೆ. ಬೆಂಗಳೂರಿನಲ್ಲಿ ಕೊಳ್ಳುವವರಿಗೆ ದಮ್ಮಯ್ಯ ಎನ್ನುತ್ತಿದ್ದ ಮಾರಾಟಗಾರರು ಈಗ ಕೆಜಿಗೆ ೫೦೦-೬೦೦ ರೂ ರೇಟು ಏರಿಸಿ, ಚೌಕಶಿ ಮಾತೇ ಇಲ್ಲ ಎನ್ನುತ್ತಿದ್ದಾರೆ. ಇದು ಹೃದ್ರೋಗಕ್ಕೆ ರಾಮಬಾಣ, ಚರ್ಮಕಾಂತಿ ವರ್ಧಕ, ರಕ್ತದೊತ್ತಡ ನಿವಾರಕ. ಆದರೆ ಡೆಂಗೆ ನಿವಾರಣೆ ಕುರಿತು ಖಚಿತ ಮಾಹಿತಿ ಇಲ್ಲದಿದ್ದರೂ ಬಾಯಿಂದ ಬಾಯಿಗೆ ಹರಡಿ ರಾಜ್ಯಾದ್ಯಂತ ರೋಗಿಗಳು ಕಿವಿಯ ಹಿಂದೆ ಬಿದ್ದಿದ್ದಾರೆ